*ಇಂಗ್ಲಿಷ್ ಮಾಧ್ಯಮ ನಿರ್ಧಾರ ಹಿಂಪಡೆಯಲು :
ಸರ್ಕಾರಕ್ಕೆ ಒತ್ತಾಯ*
ಬೆಂಗಳೂರು : 3000 ಸರ್ಕಾರಿ ಶಾಲೆಗಳಲ್ಲಿ ಖಾಸಗಿ ಪಾಲುಗಾರಿಕೆಯಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಗಳು ಪ್ರಾರಂಭಕ್ಕೆ ಸರ್ಕಾರ ಸಕಲ ಸಿದ್ಧತೆ ನಡೆಸಿದೆ. ಇಂತಹ ನಿರ್ಧಾರಗಳನ್ನು ಕೂಡಲೇ ಮರು ಪರಿಶೀಲನೆ ನಡೆಸಬೇಕೆಂದು ಸಾಹಿತಿಗಳು ಶಿಕ್ಷಣ ತಜ್ಞರು ಒತ್ತಾಯಿಸಿದರು.
ಒಂದರಿಂದ ಐದನೇ ತರಗತಿಯವರೆಗೆ ಮಾತೃಭಾಷೆ ಕನ್ನಡದಲ್ಲಿ ಶಿಕ್ಷಣ ನೀಡುವುದನ್ನು ಕಡ್ಡಾಯಗೊಳಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಕಾರ್ಪೊರೇಟ್ ಕಂಪನಿಗಳು ಸಾಮಾಜಿಕ ಕಾರ್ಯಗಳಿಗೆ ಮೀಸಲಿಡುವ ನಿಧಿ ಬಳಸಿಕೊಂಡು ಸರ್ಕಾರಿ ಶಾಲಾ ಜಾಗದಲ್ಲಿ ಆಂಗ್ಲ ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆ ಮತ್ತು ನಡೆಸುವುದು ಸಮಂಜಸವಲ್ಲ. ಅದಲ್ಲದೆ ಇಂತಹ ಶಾಲೆಗಳಿಗೆ ಶಿಕ್ಷಕರನ್ನು ನೇಮಿಸುವ ಅಧಿಕಾರವು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅಧಿಕಾರ ನೀಡಲಾಗಿದೆ. ಕೂಡಲೇ ಇಂತಹ ನಿರ್ಧಾರಗಳಿಂದ ಸರ್ಕಾರ ಹಿಂದೆ ಸರಿಯಬೇಕು. ಕನಿಷ್ಠ ಒಂದನೇ ತರಗತಿಯಿಂದ 5ನೇ ತರಗತಿಯವರೆಗೆ ಮಾತೃಭಾಷೆ ಕನ್ನಡವನ್ನು ಕಡ್ಡಾಯಗೊಳಿಸಬೇಕು ಎಂದು ಶಿಕ್ಷಣ ತಜ್ಞ ವಿ.ಪಿ ನಿರಂಜನ ಆರಾಧ್ಯ,. ಜಿ. ರಾಮಕೃಷ್ಣ, ಅಶ್ವಥ್ ನಾರಾಯಣ, ರಾ. ನಂ – ಚಂದ್ರಶೇಖರ, ಸಾಹಿತಿ ವಸುಂದರ ಭೂಪತಿ, ನಿರ್ದೇಶಕ ಟಿ.ಎಸ್ ನಾಗಾಭರಣ, ಪತ್ರಕರ್ತ ಬಿ. ಎಮ್ ಹನಿಪ್, ನಿವೃತ್ತ ಅಧಿಕಾರಿ ವಿಷು ಕುಮಾರ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
2015ರ ವಿಧಾನಸಭೆ ಮತ್ತು ವಿಧಾನ ಪರಿಷತ್ತಿ ನಿಂದ ಅಂಗೀಕಾರಗೊಂಡು ರಾಷ್ಟ್ರಪತಿ ಒಪ್ಪಿಗೆ ದೊರಕದೆ ಬಿದ್ದಿರುವ ಮಾತೃಭಾಷೆ ಮಾಧ್ಯಮ ಕಡ್ಡಾಯಗೊಳಿಸುವ ಮಸೂದೆಗೆ ಒಪ್ಪಿಗೆ ಪಡೆಯಬೇಕು. ಅದಕ್ಕಾಗಿ ತಜ್ಞರನ್ನು ಒಳಗೊಂಡ ಅಧಿಕಾರಿಗಳು ಆಯೋಗವನ್ನು ರಾಷ್ಟ್ರಪತಿಗಳ ಬಳಿಗೆ ಕಳಿಸಬೇಕು. ಆಕ್ಷೇಪಣೆಗಳಿಗೆ ಸರಿಯಾದ ಉತ್ತರ ನೀಡುವ ಮೂಲಕ ಒಪ್ಪಿಗೆ ಪಡೆಯಲು ಪ್ರಯತ್ನಿಸಬೇಕು ಎಂದರು.
ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ರೂ.1000 ಅಧಿಕ ದ್ವಿಭಾಷ ಮಾಧ್ಯಮ ಶಾಲೆಗಳನ್ನು ಆರಂಭಿಸುವ ತೀರ್ಮಾನವನ್ನು ಸರ್ಕಾರ ಕೂಡಲೇ ಕೈಬಿಡಬೇಕು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸರ್ಕಾರಕ್ಕೆ ಸಲ್ಲಿಸಿರುವ ಶಾಲೆಗಳ ಸಬಲೀಕರಣ ವರದಿಯನ್ನು ಅಂಗೀಕರಿಸಿ ಅನುಷ್ಠಾನಗೊಳಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ಸಿದ್ದಾರ್ಥ
ವರ್ಲ್ಡ್ ಆಫ್ ಮೋಹನ್



