*ಝೀಕಾ ವೈರಾಣು ನಿವಾರಣೆ ಮುನ್ನೆಚ್ಚರಿಕೆಗೆ ಸೂಚನೆ*
ಬೆಂಗಳೂರು: ಸೊಳ್ಳೆ ಉತ್ಪತ್ತಿ ಮಾಡುವ ತಾಣಗಳ ನಾಶಪಡಿಸುವಿಕೆ ಸೇರಿ ವಿವಿಧ ರೀತಿಯ ಮುನ್ನೆಚ್ಚರಿಕೆ ಕ್ರಮಗಳ ಮೂಲಕ ಝೀಕಾ ವೈರಾಣು ಹರಡದಂತೆ ತಡೆಯಬೇಕು. ಈ ರೋಗಕ್ಕೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆ ಹಾಗೂ ಚಿಕಿತ್ಸೆ ಸಂಪೂರ್ಣ ಉಚಿತವಾಗಿ ಇರುತ್ತದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಡೆಂಗ್ಯೂ ಚಿಕನ್ ಗುನ್ಯಾ ರೋಗ ಹರಡುವ ಈಡೀಸ್ ಜಾತಿ ಸೊಳ್ಳೆಗಳೇ ಝೀಕಾ ವೈರಾಣು ಹರಡುವಿಕೆಗೆ ಕಾರಣವಾಗಿದೆ. ಈ ಸೊಳ್ಳೆಗಳು ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಕಚ್ಚುತ್ತವೆ. ನಿಂತ ಸ್ವಚ್ಛ ನೀರು ಸೊಳ್ಳೆಗಳು ಉತ್ಪತ್ತಿ ತಾಣಗಳು ಆಗಿವೆ. ಬಹುತೇಕ ಝೀಕಾ ವೈರಾಣು ಸೋಂಕಿತರಿಗೆ ರೋಗಲಕ್ಷಣಗಳು ಕಂಡುಬರುವುದಿಲ್ಲ. ಜ್ವರ ತಲೆನೋವು ಸೇರಿ ವಿವಿಧ ಲಕ್ಷಣಗಳು ಎರಡರಿಂದ ಏಳು ದಿನಗಳವರೆಗೆ ಇರುತ್ತದೆ. ಗರ್ಭಿಣಿಯರು ಈ ಜ್ವರಕ್ಕೆ ಒಳಗಾದಲ್ಲಿ ಜನಿಸಿದ ಶಿಶುವಿನ ತಲೆಯ ಬೆಳವಣಿಗೆ ಕುಂಠಿತವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಇಲಾಖೆ ತಿಳಿಯಪಡಿಸಿದೆ.
ರೋಗ ಲಕ್ಷಣಗಳು ಕಂಡು ಬಂದವರ ರಕ್ತದ ಸ್ಯಾಂಪಲ್ ಹಾಗೂ ಮೂತ್ರದ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದಾಗ ವೈರಾಣು ಪತ್ತೆ ಮಾಡಲಾಗುತ್ತದೆ. ಇದರ ಬಗ್ಗೆ ಭಯಪಡುವ ಬದಲು ಮುನ್ನೆಚ್ಚರಿಕೆ ವಹಿಸಬೇಕೆಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಝೀಕಾ ವೈರಾಣು ಸೋಂಕಿನ ಪ್ರಮುಖ ಗುಣಲಕ್ಷಣಗಳು : ಜ್ವರ, ತಲೆನೋವು, ಕಣ್ಣು ಕೆಂಪಾಗುವಿಕೆ, ದದ್ದುಗಳು, ಕೀಳು ಮತ್ತು ಸ್ನಾಯುಗಳಲ್ಲಿ ನೋವು.
ಮುಂಜಾಗ್ರತ ಕ್ರಮಗಳು
* ಸ್ವಚ್ಛತೆ ಕಾಪಾಡುವುದು
* ಸೊಳ್ಳೆ ಉತ್ಪತ್ತಿ ತಾಣವನ್ನು ನಾಶಪಡಿಸುವುದು
* ನೀರು ನಿಲ್ಲದಂತೆ ಮುಂಜಾಗ್ರತೆ ಕ್ರಮವನ್ನು ವಹಿಸುವುದು
* ನೈರ್ಮಲ್ಯವನ್ನು ಕಾಪಾಡುವುದು.
* ಸೊಳ್ಳೆ ಪರದೆ, ಸೊಳ್ಳೆ ನಿರೋಧಕಗಳನ್ನು ಬಳಸುವುದು.
* ನೀರು ಸಂಗ್ರಹಣ ಪರಿಕರಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸುವುದು
ಸಿದ್ದಾರ್ಥ
ವರ್ಲ್ಡ್ ಆಫ್ ಮೋಹನ್



